ಅಭಿಪ್ರಾಯ / ಸಲಹೆಗಳು

ರಾಜ್ಯ

ಕರ್ನಾಟಕ – ಆಹಾರ ಸಂಸ್ಕರಣೆಯಲ್ಲಿ ಬಲ ಹಾಗೂ ಅವಕಾಶಗಳು

ಕೃಷಿ ಆಧಾರಿತ ಕೈಗಾರಿಕೆಗಳು ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿಯೂ ಹರಡಿವೆ. ಪ್ರಸ್ತುತ, ಅಂದರೆ ದಿನಾಂಕ: 31.03.2015ರಂದಿಗೆ, ರಾಜ್ಯದಲ್ಲಿ ಒಟ್ಟು ರೂ.4,42,879 ಲಕ್ಷಗಳ ಹೂಡಿಕೆಯೊಂದಿಗೆ 54,905 ಕೃಷಿ ಸಂಸ್ಕರಣಾ ಘಟಕಗಳಿದ್ದು, 3,24,148 ಉದ್ಯೋಗಿಗಳನ್ನು ಹೊಂದಿದೆ.

 

ಮೇಲ್ನೋಟ

ಉನ್ನತ ಮಟ್ಟದ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಯೊಂದಿಗೆ ಉತ್ತಮ-ಅಭಿವೃದ್ಧಿ ಹೊಂದಿರುವ ಕೃಷಿ ವಾಣಿಜ್ಯ ಹಾಗೂ ಆಹಾರ ಸಂಸ್ಕರಣಾ ಕ್ಷೇತ್ರವು, ಬೆಳೆ ವ್ಯರ್ಥತೆಯನ್ನು ಕಡಿಮೆಗೊಳಿಸುತ್ತದೆ ಹಾಗೂ ಬೆಳೆ ವೈವಿಧ್ಯತೆಯನ್ನು ಪ್ರೋತ್ಸಾಹಿಸುತ್ತದೆ, ರೈತರಿಗೆ ಉತ್ತಮ ಲಾಭಗಳಿಕೆಯನ್ನು ಖಾತ್ರಿಪಡಿಸುತ್ತದೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ರಫ್ತು ಆದಾಯವನ್ನು ಹೆಚ್ಚಿಸುತ್ತದೆ. ಆಹಾರ ಭದ್ರತೆ, ಆಹಾರ ಉಬ್ಬರಗಳಂತಹ ನಿರ್ಣಾಯಕ ವಿಷಯಗಳನ್ನು ಬಗೆಹರಿಸುವ ಸಾಮರ್ಥ್ಯವನ್ನು ಹೊಂದಿರುವುದರ ಜೊತೆಗೆ ಈ ಕ್ಷೇತ್ರವು ಜನರಿಗೆ ಆರೋಗ್ಯಕರ ಹಾಗೂ ಪೌಷ್ಠಿಕ ಆಹಾರವನ್ನು ಒದಗಿಸುತ್ತದೆ

 

ಕೃಷಿ

ಕರ್ನಾಟಕದ ವೈವಿಧ್ಯಮಯ ಕೃಷಿ ಹವಾಮಾನವು ಸೂರ್ಯಕಾಂತಿ, ಮೆಕ್ಕೆಜೋಳ, ತೊಗರಿ, ಜೋಳ, ಕಬ್ಬು, ಕಡಲೆ, ಸೋಯಾಬೀನ್, ಶೇಂಗಾ, ಹೆಸರುಕಾಳು, ಉದ್ದು, ಕುಸುಬೆ, ಭತ್ತ, ಹತ್ತಿ ಇತ್ಯಾದಿ ಕೃಷಿ ಬೆಳೆಗಳನ್ನು ಬೆಳೆಯಲು ಸಹಾಯಕಾರಿಯಾಗಿದೆ. ಇದಲ್ಲದೆ, ನವಣೆ, ಸಾಮೆ, ರಾಗಿ, ಸಜ್ಜೆ, ಹರಕ ಇತ್ಯಾದಿ ವೈವಿಧ್ಯಮಯ ತೃಣ ಧಾನ್ಯಗಳನ್ನೂ ಸಹ ನಮ್ಮ ರಾಜ್ಯದಲ್ಲಿ ಬೆಳೆಯಲಾಗುತ್ತಿದೆ.

2014-15ನೇ ಸಾಲಿನಲ್ಲಿ 112.32 ಲಕ್ಷ ಮೆಟ್ರಿಕ್ ಟನ್ ಧಾನ್ಯಗಳು, 13.90 ಲಕ್ಷ ಮೆಟ್ರಿಕ್ ಟನ್ ದ್ವಿದಳ ಧಾನ್ಯಗಳು, 9.59 ಲಕ್ಷ ಮೆಟ್ರಿಕ್ ಟನ್ ಎಣ್ಣೆಬೀಜಗಳು, 23.12 ಲಕ್ಷ ಬೇಲ್‍ಗಳ ಹತ್ತಿ ಮತ್ತು 437.76 ಲಕ್ಷ ಮೆಟ್ರಿಕ್ ಟನ್ ಕಬ್ಬು ಬೆಳೆಗಳನ್ನು ಬೆಳೆಯಲಾಗಿದೆ. ವಿವರಗಳನ್ನು ಅನುಬಂಧ–II ರಲ್ಲಿ ನೀಡಲಾಗಿದೆ.

 

ತೋಟಗಾರಿಕೆ

ನಮ್ಮ ರಾಜ್ಯವು ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಹಣ್ಣಿನ ಬೆಳೆಗಳಾದ ಸಪೋಟ, ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ, ಮಾವು, ಹಲಸು, ಪರಂಗಿ, ನಿಂಬೆ, ಕಿತ್ತಳೆ, ಬಾಳೆ, ಸೀಬೆ, ಇತ್ಯಾದಿ; ತರಕಾರಿ ಬೆಳೆಗಳಾದ ಈರುಳ್ಳಿ (ಬೆಂಗಳೂರು ಗುಲಾಬಿ ಈರುಳ್ಳಿ ಸೇರಿದಂತೆ), ಆಲೂಗೆಡ್ಡೆ, ಮಿಡಿಸೌತೆಕಾಯಿ, ಕ್ಯಾಪ್ಸಿಕಮ್, ಹಸಿರು ಮೆಣಸಿನಕಾಯಿ, ಟೊಮೋಟೊ, ಸೌತೆಕಾಯಿ, ಕ್ಯಾರೆಟ್, ಹುರಳಿಕಾಯಿ ಇತ್ಯಾದಿ; ತೋಟದ ಮತ್ತು ಸಾಂಬಾರ ಬೆಳೆಗಳಾದ ಕಾಫಿ, ಅಡಿಕೆ, ಹುಣಸೆ, ತೆಂಗು, ವೆನಿಲ್ಲಾ, ಕರಿಮೆಣಸು, ಲವಂಗ, ಏಲಕ್ಕಿ, ಒಣ ಮೆಣಸಿನಕಾಯಿ, ಅರಿಶಿಣ, ಗೋಡಂಬಿ, ಶುಂಠಿ, ಬೆಳ್ಳುಳ್ಳಿ ಇತ್ಯಾದಿ ಮತ್ತು ಹೂವಿನ ಬೆಳೆಗಳಾದ ಗುಲಾಬಿ, ಮಲ್ಲಿಗೆ, ಜರ್ಬೆರಾ, ಕಾರ್ನೇಷನ್, ಅಂತೂರಿಯಮ್, ಆರ್ಕಿಡ್, ಲಿಲ್ಲೀಸ್, ಸೇವಂತಿಗೆ, ಟ್ಯೂಬ್‍ರೋಸ್, ಕ್ರಾಸ್ಸಾಂಡ್ರಾ, ಆಸ್ಟರ್, ಮ್ಯಾರಿಗೋಲ್ಡ್ ಇತ್ಯಾದಿಗಳನ್ನು ನಮ್ಮ ರಾಜ್ಯದಲ್ಲಿ ಬೆಳೆಯಲಾಗುತ್ತಿದೆ.ರಾಜ್ಯದಲ್ಲಿ ತೋಟಗಾರಿಕಾ ಪ್ರದೇಶವು ಒಟ್ಟು ವ್ಯವಸಾಯ ಯೋಗ್ಯ ಪ್ರದೇಶದ ಶೇಕಡಾ 16% ರಷ್ಟಿದೆ. ಇದರಲ್ಲಿ ತೋಟಗಾರಿಕೆ ಬೆಳೆ (45%), ತರಕಾರಿ (23%), ಹಣ್ಣುಗಳು (20%), ಸಾಂಬಾರ (10%) ಮತ್ತು ವಾಣಿಜ್ಯ ಬೆಳೆಗಳಾದ ಪುಷ್ಪಗಳು, ಔಷಧೀಯ ಹಾಗೂ ಸುಗಂಧಿತ ಬೆಳೆ (2%) ಗಳು ಸೇರಿವೆ.2013-14ನೇ ಸಾಲಿನಲ್ಲಿ ರಾಜ್ಯವು 66.26 ಲಕ್ಷ ಮೆಟ್ರಿಕ್ ಟನ್ ಹಣ್ಣುಗಳನ್ನು, 82.50 ಲಕ್ಷ ಮೆಟ್ರಿಕ್ ಟನ್ ತರಕಾರಿಗಳನ್ನು, 4.85 ಲಕ್ಷ ಮೆಟ್ರಿಕ್ ಟನ್ ತೋಟಗಾರಿಕಾ ಬೆಳೆಗಳನ್ನು, 6.56 ಲಕ್ಷ ಮೆಟ್ರಿಕ್ ಟನ್ ಸಾಂಬಾರ ಬೆಳೆಗಳನ್ನು, 2.14 ಲಕ್ಷ ಮೆಟ್ರಿಕ್ ಟನ್ ವಾಣಿಜ್ಯ ಪುಷ್ಪಗಳನ್ನು, 11351 ಮೆಟ್ರಿಕ್ ಟನ್ ಔಷಧೀಯ ಸಸ್ಯಗಳನ್ನು ಮತ್ತು 14282 ಮೆಟ್ರಿಕ್ ಟನ್‍ಗಳಷ್ಟು ಸುಗಂಧ ಸಸ್ಯಗಳನ್ನು ಬೆಳೆದಿದೆ. ಅನುಬಂಧ–II ರಲ್ಲಿ ವಿವರಗಳನ್ನು ನೀಡಲಾಗಿದೆ.ಕರ್ನಾಟಕದಲ್ಲಿ ಬೆಳೆಯಲಾದ ಒಟ್ಟು ಹಣ್ಣು ಮತ್ತು ತರಕಾರಿಗಳ ಕೇವಲ, ಶೇಕಡಾ 1ರಷ್ಟು ಮಾತ್ರ ಸಂಸ್ಕರಣೆಯಾಗಿ ಮೌಲ್ಯವರ್ಧನೆಯಾಗುತ್ತಿದೆ. ಅಸಮರ್ಪಕ ಶೀಥಲ ಸಂಗ್ರಹಾಗಾರಗಳು ಹಾಗೂ ಅವಶ್ಯಕವಾದ ಸಾರಿಗೆ ವ್ಯವಸ್ಥೆಯ ಅನುಪಸ್ಥಿತಿ, ಉತ್ಪನ್ನಗಳ ಅಸಮರ್ಪಕ ನಿರ್ವಹಣೆ, ಸಂಸ್ಕರಣಾ ಘಟಕಗಳು ಹಾಗೂ ಮೌಲ್ಯವರ್ಧನಾ ಸೌಲಭ್ಯಗಳ ಕೊರತೆಗಳ ಕಾರಣಗಳಿಂದಾಗಿ ಸುಮಾರು ಶೇಕಡಾ 25ರಿಂದ 30ರಷ್ಟು ಕೊಯ್ಲು ನಂತರದ ನಷ್ಟವನ್ನು ರೈತರು ಅನುಭವಿಸುತ್ತಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸಂರಕ್ಷಿಸಲು 2.97 ಲಕ್ಷ ಮೆಟ್ರಿಕ್ ಟನ್ ಸಾಮಥ್ರ್ಯದ ಕೇವಲ 98 ಶೀತಲ ಸಂಗ್ರಹಾಗಾರಗಳಿವೆ. ಅವುಗಳಲ್ಲಿ 2 ಸಹಕಾರಿ, 90 ಖಾಸಗಿ ಮತ್ತು 6 ಸಾರ್ವಜನಿಕ ವಲಯದಲ್ಲಿವೆ. ಆದುದರಿಂದ ಶೀತಲ ಸಂಗ್ರಹಾಗಾರಗಳು ಮತ್ತು ಸರಕು ಸಾಗಣೆ ವ್ಯವಸ್ಥೆಯ ಸೌಲಭ್ಯಗಳನ್ನು ಸದೃಢಗೊಳಿಸಲು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಸಾಕಷ್ಟು ಅವಕಾಶಗಳಿವೆ.

 

ಪಶುಸಂಗೋಪನೆ

ಕರ್ನಾಟಕದಲ್ಲಿ ಪಶುಸಂಗೋಪನೆಯನ್ನು ಅವಲಂಬಿಸಿ ಜೀವನ ನಡೆಸುತ್ತಿರುವ ಗ್ರಾಮೀಣ ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಪಶುಸಂಗೋಪನಾ ವಲಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕರ್ನಾಟಕವು 19ನೇ ಜಾನುವಾರು ಗಣತಿಯ ಪ್ರಕಾರ 2.90 ಕೋಟಿ ಜಾನುವಾರು ಮತ್ತು 5.34 ಕೋಟಿ ಕುಕ್ಕುಟ ಸಂಖ್ಯೆಯನ್ನು ಹೊಂದಿದೆ. ಭಾರತ ಸರ್ಕಾರವು ನಮ್ಮ ರಾಜ್ಯವನ್ನು ಗೋಮಾರಿ (ರಿಂಡರ್‍ಪೆಸ್ಟ್) ರೋಗ ರಹಿತ ರಾಜ್ಯವೆಂದು ಘೋಷಿಸಿದೆ.

2014-15ನೇ ಸಾಲಿನ ಕೃಷಿ ಮತ್ತು ಸಂಬಂಧಿಸಿದ ಚಟುವಟಿಕೆಗಳ ರಾಜ್ಯದ ಸಮಗ್ರ ಸ್ಥಳೀಯ ಉತ್ಪನ್ನದಲ್ಲಿ ಪಶುಸಂಗೋಪನೆಯ ಪಾಲುದಾರಿಕೆ ಶೇಕಡ 20.27 ಆಗಿರುತ್ತದೆ. ಭಾರತದಲ್ಲಿ ಕೋಳಿ ಮತ್ತು ಜಾನುವಾರುಗಳ ಸಂಖ್ಯಾ ಪ್ರಮಾಣದಲ್ಲಿ ಕರ್ನಾಟಕದ ಪಾಲು ಕ್ರಮವಾಗಿ ಶೇಕಡ 5.41 ಮತ್ತು 7.33 ಆಗಿರುತ್ತದೆ.

2014-15ನೇ ಸಾಲಿನಲ್ಲಿ ರಾಜ್ಯದಲ್ಲಿ 43,948 ಲಕ್ಷ ಮೊಟ್ಟೆಗಳು (ರಾಷ್ಟ್ರದಲ್ಲಿ 7ನೇ ಸ್ಥಾನ), 1.81 ಲಕ್ಷ ಮೆಟ್ರಿಕ್ ಟನ್ ಮಾಂಸ (ರಾಷ್ಟ್ರದಲ್ಲಿ 11ನೇ ಸ್ಥಾನ) ಹಾಗೂ 61.23 ಲಕ್ಷ ಮೆಟ್ರಿಕ್ ಟನ್ ಹಾಲನ್ನು (ರಾಷ್ಟ್ರದಲ್ಲಿ 11ನೇ ಸ್ಥಾನ) ಉತ್ಪಾದಿಸಲಾಗಿದೆ. ವಿವರಗಳನ್ನು ಅನುಬಂಧ – II ರಲ್ಲಿ ನೀಡಲಾಗಿದೆ.

 

ಮೀನುಗಾರಿಕೆ

ಕರ್ನಾಟಕ ರಾಜ್ಯದಲ್ಲಿ, 320 ಕಿ.ಮೀ. ಕರಾವಳಿ ಪ್ರದೇಶ ಒಳಗೊಂಡಂತೆ 27000 ಚ.ಕಿ.ಮೀ. ಒಳನಾಡು ಮೀನುಗಾರಿಕೆ ಪ್ರದೇಶ ಹಾಗೂ ಸುಮಾರು 5.65 ಲಕ್ಷ ಹೆಕ್ಟೇರ್ ನ ವಿವಿಧ ಒಳನಾಡು ಜಲಸಂಪನ್ಮೂಲಗಳಿದ್ದು ಮೀನುಗಾರಿಕೆ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಸುಮಾರು 8000 ಹೆಕ್ಟೇರ್ ಉಪ್ಪು ನೀರಿನ ಪ್ರದೇಶವು ಸೀಗಡಿ/ಮೀನು ಸಂಸ್ಕೃತಿಗೆ ಉತ್ತಮ ಅವಕಾಶಗಳನ್ನು ಒದಗಿಸಿದೆ. ದೇಶದಲ್ಲಿ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳನ್ನು ಪರಿಚಯಿಸಿದ ಮುಂಚೂಣಿ ರಾಜ್ಯಗಳಲ್ಲಿ ಕರ್ನಾಟಕವೂ ಸಹ ಒಂದಾಗಿದೆ. ಈ ಪ್ರಯತ್ನವು ಸಮುದ್ರದಲ್ಲಿ ಸಂಘಟಿತ ಮೀನುಗಾರಿಕೆಗೆ ಸಹಾಯಕಾರಿಯಾಗಿದೆ. ಕರಾವಳಿ ಪ್ರದೇಶದಲ್ಲಿ 3780 ಯಾಂತ್ರೀಕೃತ ಮೀನುಗಾರಿಕಾ ದೋಣಿಗಳು, 6978 ಮೋಟಾರ್ ಚಾಲಿತ ದೋಣಿಗಳು ಮತ್ತು 8119 ಸಾಂಪ್ರದಾಯಿಕ ದೋಣಿಗಳು ಕಾರ್ಯನಿರ್ವಹಿಸುತ್ತಿವೆ. ಇತ್ತೀಚಿನ ವರ್ಷಗಳಲ್ಲಿ, 20 ಮೀ.ಗೂ ಹೆಚ್ಚಿನ ಉದ್ದದ ಹಾಗೂ ಎಲ್ಲಾ ರೀತಿಯ ಸಂವಹನ ಮತ್ತು ಸುರಕ್ಷತೆ ಉಪಕರಣಗಳನ್ನು ಹೊಂದಿರುವ ದೊಡ್ಡ ಯಾಂತ್ರೀಕೃತ ಮೀನುಗಾರಿಕಾ ದೋಣಿಗಳನ್ನು ಬಳಸಿ ಆಳವಾದ ನೀರಿನಲ್ಲಿ ಮೀನುಗಾರಿಕೆ ನಡೆಸುತ್ತಿರುವುದರಿಂದ ಹೆಚ್ಚು ಹೆಚ್ಚು ಮೀನುಗಳನ್ನು ಹಿಡಿಯಲು ಸಾಧ್ಯವಾಗಿದೆ. ರಾಜ್ಯದಲ್ಲಿ 8 ಮೀನುಗಾರಿಕೆ ಬಂದರುಗಳು ಮತ್ತು 88 ಮೀನು ಇಳಿಸುವ ತಾಣಗಳಿವೆ. ರಾಜ್ಯದಲ್ಲಿ 2010-11ರಲ್ಲಿ 5.26 ಲಕ್ಷ ಮೆಟ್ರಿಕ್ ಟನ್ ಇದ್ದ ಮೀನು ಉತ್ಪಾದನೆ 2014-15ರಲ್ಲಿ 6.13 ಲಕ್ಷ ಮೆಟ್ರಿಕ್ ಟನ್‍ಗೆ ಏರಿಕೆಯಾಗಿದೆ. ಸಮುದ್ರದಿಂದ ಹಿಡಿಯುವ ಮೀನುಗಳ ಪ್ರಮಾಣ ಮತ್ತು ರಫ್ತು ಪ್ರಮಾಣದ ವಿವರಗಳನ್ನು ಅನುಬಂಧ- II ರಲ್ಲಿ ತಿಳಿಸಲಾಗಿದೆ.

 

ಇತ್ತೀಚಿನ ನವೀಕರಣ​ : 19-03-2021 01:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಆಹಾರ ಕರ್ನಾಟಕ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080